ನೀಬೂರ್, ಬಾರ್ಟೊಲ್ಟ್ ಜೊಯೊರ್ಕ್
	1776-1831. ಜರ್ಮನ್ ಇತಿಹಾಸಶಾಸ್ತ್ರಜ್ಞ. ಡೆನ್ಮಾರ್ಕಿನ ಕೋಪನ್‍ಹೇಗನ್‍ನಲ್ಲಿ 1776ರ ಆಗಸ್ಟ್ 27ರಂದು ಹುಟ್ಟಿದ. ತಂದೆ ಕಾರ್ಸಟನ್ ನೀಬೂರ್ ಭೂಪರಿಶೋಧಕ. ಪ್ರಾರಂಭದಲ್ಲಿ ಕೀಲ್ ವಿಶ್ವವಿದ್ಯಾಲಯದಲ್ಲೂ ಅನಂತರ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‍ಗಳಲ್ಲೂ ಇವನು ವಿದ್ಯಾಭ್ಯಾಸವನ್ನು ಮಾಡಿ ಡೇನಿಸ್ ಅರ್ಥ ಮಂತ್ರಿ ಕೌಂಟ್ ಸ್ಕಿಮೆಲ್‍ಮನ್ನನ ಕಾರ್ಯದರ್ಶಿಯಾದ. 1804ರಲ್ಲಿ ಇವನನ್ನು ಡೇನಿಸ್ ಬ್ಯಾಂಕಿನ ನಿರ್ದೇಶಕನಾಗಿ ನೇಮಿಸಲಾಯಿತು. ಪ್ರಷ್ಯದ ಪ್ರಧಾನ ಮಂತ್ರಿಯಾಗಿದ್ದ ಬ್ಯಾರನ್ ಫಾಸ್ ಸ್ಟೀನನ ಅಭಿಲಾಷೆಯ ಮೇರೆಗೆ ನೀಬೂರ್ ಪ್ರಷ್ಯಕ್ಕೆ ಬಂದು ಅಲ್ಲಿಯ ಬ್ಯಾಂಕ್ ನಿರ್ದೇಶಕನ ಹುದ್ದೆಯನ್ನು ವಹಿಸಿಕೊಂಡ (1806). 1808ರಲ್ಲಿ ಇವನು ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯದ ಇತಿಹಾಸ ಲೇಖಕನಾಗಿ ನೇಮಕಗೊಂಡ. ಅದೇ ಕಾಲದಲ್ಲಿ ಇವನು ಬರ್ಲಿನ್ ಅಕಾಡೆಮಿಯ ಸದಸ್ಯನಾದ. 1810ರಲ್ಲಿ ಇವನು ರೋಮನ್ ಇತಿಹಾಸದ ಮೇಲೆ ಉಪನ್ಯಾಸಗಳನ್ನು ನೀಡಿದ. ಇವುಗಳ ಆಧಾರದ ಮೇಲೆಯೇ ಮುಂದೆ ರೋಮನ್ ಇತಿಹಾಸ ಕುರಿತು ಇವನ ಪ್ರಸಿದ್ಧ ಗ್ರಂಥ ರಚಿತವಾಯಿತು. 1816ರಲ್ಲಿ ಇವನು ಪ್ರಷ್ಯದ ರಾಯಭಾರಿಯಾಗಿ ವ್ಯಾಟಿಕನ್‍ಗೆ ಹೋದ. 1823ರಲ್ಲಿ ಬಾನ್‍ಗೆ ಹಿಂದಿರುಗಿದ. ಇವನು ತೀರಿಕೊಂಡಿದ್ದು 1831ರ ಜನವರಿ 31ರಂದು. 

	ನೀಬೂರನಿಗೆ 18ನೆಯ ವಯಸ್ಸಿನಲ್ಲಿ ಯೂರೋಪಿನ 18 ಭಾಷೆಗಳು ಬರುತ್ತಿದ್ದುವು. ಅಲ್ಲದೇ ಇವನು ಹೀಬ್ರೂ, ಪರ್ಷಿಯನ್ ಮತ್ತು ಅರಾಬಿಕ್ ಭಾಷೆಗಳನ್ನು ಕಲಿತಿದ್ದ. ಇವನು ತತ್ತ್ವಶಾಸ್ತ್ರ, ಗಣಿತಶಾಸ್ತ್ರ, ರಾಸಾಯನಶಾಸ್ತ್ರ, ಮತ್ತು ಜೀವಶಾಸ್ತ್ರಗಳಲ್ಲಿ ಪರಿಣತನಾಗಿದ್ದುದಲ್ಲದೇ ರಾಜನೀತಿ ಮತ್ತು ಆಡಳಿತವನ್ನೂ ಬಲ್ಲವನಾಗಿದ್ದ.

	ಆಧುನಿಕ ಇತಿಹಾಸಶಾಸ್ತ್ರದ ಬೆಳವಣಿಗೆಗೆ ನೀಬೂರನ ಕಾಣಿಕೆ ಮುಖ್ಯವಾದ್ದು. ರೋಮನ್ ಸಾಮ್ರಾಜ್ಯವನ್ನು ಕುರಿತು ಇವನು ರಚಿಸಿದ ಗ್ರಂಥಗಳು ಆಧುನಿಕ ಕಾಲದಲ್ಲಿ ರೋಮನ್ ಸಾಮ್ರಾಜ್ಯದ ಇತಿಹಾಸವನ್ನು ರಚಿಸಲು ಪ್ರೇರಕಶಕ್ತಿಯಾದವು. ಹದಿನೆಂಟನೆಯ ಶತಮಾನದ ವರೆವಿಗೂ ಇತಿಹಾಸ ರಚನೆಯಲ್ಲಿ ತೊಡಗಿದ್ದ ಭಾಷಾತಂತ್ರಜ್ಞರ ವಿಧಾನದಿಂದ ಭಿನ್ನವಾಗಿ, ದೊರೆಯಬಹುದಾದ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಿ ರೋಮನರ ರಾಜಕೀಯ ಮತ್ತು ವಿಶೇಷವಾಗಿ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾದ ಸಂಗತಿಗಳನ್ನು ಗುರುತಿಸಿ, ವಿಶ್ಲೇಷಿಸಿ, ಇವನು ಇತಿಹಾಸವನ್ನು ರಚಿಸಿದ.							(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ